ನಮ್ಮ “ಸೆಕ್ಯುಲರ್” ಕಾಂಗ್ರೆಸ್ ಸರ್ಕಾರ ಮತ್ತೊಂದು ಘನಕಾರ್ಯಕ್ಕೆ ಕೈಹಾಕಿದೆ. ಈ ಸಲ "ರಾಮನೂ ಇಲ್ಲ. ರಾಮಾಯಣವೂ ಇಲ್ಲ. ರಾಮಸೇತೂನೂ ಇಲ್ಲ. ನಡೀರೋ ನಡೀರೊ..” ಅಂತ ಗದರಿಸಿ ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಹಿಂದೂಗಳ ‘ಬುಡ’ ಕ್ಕೇ ಕೈಹಾಕುವ ಧೈರ್ಯ ಮಾಡಿದೆ. ಇದೇ ರೀತಿ ಮುಸ್ಲಿಮ್ ಧರ್ಮಗುರುಗಳ ಗಡ್ಡಕ್ಕೆ ಕೈಹಾಕಿ "ಹಜ್ಜೂ ಇಲ್ಲ. ಹಾಗಲಕಾಯಿ ಗೊಜ್ಜೂ ಇಲ್ಲ." ಅಂತಾನೋ ಅಥವಾ ಕ್ರಿಶ್ಚಿಯನ್ ಪಾದ್ರಿಗಳ ಕೊರಳಪಟ್ಟಿ ಹಿಡಿದು “ಮತಾಂತರ ನಿಲ್ಲಿಸ್ರೋ ಪಾಪಿಗಳಾ...” ಅಂತ ಗದರಿದ್ದರೆ ಅವರ ಸೆಕ್ಯುಲರ್ ಧೈರ್ಯವನ್ನು ಮೆಚ್ಚಿ ನಾವೆಲ್ಲಾ ಉಘೇ... ಉಘೇ... ಅನ್ನಬಹುದಿತ್ತು.
ಈ ಹೇಳಿಕೆ ಕೊಟ್ಟ ಮಾರನೇ ದಿನವೇ ತಪ್ಪಾಯ್ತು ಅಂತ ಕಾಂಗ್ರೆಸ್ ಕೇಳಿಕೊಂಡಿದೆ. ಮಗೂನ ಚಿವುಟಿ ಸಮಾಧಾನ ಮಾಡೋಹಾಗೆ ಕಾಂಗ್ರೆಸ್ ಮೇಡಮ್ಮು “ಇದೆಲ್ಲ ಹೆಂಗಾಯ್ತು. ರಿಪೋರ್ಟ್ ಕೊಡಿ” ಅಂತ ಗುಡುಗಿದ್ದಾರಂತೆ. ಇಂತಹ “ಅಚಾತುರ್ಯ”ಗಳು ಹಿಂದೂಗಳಿಗೇ ಸಂಬಂಧಿಸಿರುತ್ತೆ ಅನ್ನೋದು ನಂಬಲಸಾಧ್ಯವಾದರೂ ಸತ್ಯ! ರಾಮ ಇದ್ದನೋ ಇಲ್ಲವೋ ಅದರಲ್ಲಿ ಸಂಶಯವಿರಬಹುದು. ಆದರೆ ರಾಮಸೇತುವೆಯನ್ನು ಒಡೆಯಲೇಬೇಕು ಎಂದು ತೀರ್ಮಾನಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಅದಕ್ಕೆ ಬೇಕಾದ ಬೆಂಬಲ ದೊರಕಿಸಿಕೊಳ್ಳಲು, ಹಿಂದೂಗಳ ಭಾವನೆಯನ್ನು ತುಳಿಯಲು ಯಾವ ಮಟ್ಟಕ್ಕಾದರೂ ಇಳಿಯುತ್ತೆ ಎಂಬುದರಲ್ಲಿ ಯಾವ ಅಣುವಿನಷ್ಟು ಸಂದೇಹವೂ ಇಲ್ಲ.
ವೈಜ್ಞಾನಿಕ ಆಧಾರಗಳನ್ನಷ್ಟೇ ನಂಬಿಕೊಂಡು ಕೂರುವುದು ಯಂತ್ರಮಾನವನಿಗೆ ಮಾತ್ರ ಸಾಧ್ಯವಾಗಬಹುದು. ರಕ್ತ, ಮಾಂಸಗಳ ಕುಡಿಕೆಯಾದ ಮಾನವನಿಗಲ್ಲ. ರಾಮನಾಮದ ಬಲದಿಂದಲೇ ಕೋಟ್ಯಾಂತರ ಹಿಂದೂಗಳು ಸಾವಿರಾರು ವರ್ಷ ಜೀವನ ಸಾಗಿಸಿದ್ದಾರೆ. ವೃದ್ದಾಪ್ಯದಲ್ಲಿ ರಾಮಕೋಟಿ ಬರೆದುಕೊಂಡು ನೆಮ್ಮದಿಯಾಗಿ ಜೀವನ ನಡೆಸಿದ್ದಾರೆ. (ಸರ್ಕಾರ ನೀಡುವ ಪೆನ್ಶನ್ ಮೇಲಲ್ಲ.) ಇಂತ ನಿರುಪದ್ರವಿ ನಂಬಿಕೆಯ ಮೇಲೆ ಕಾಂಗ್ರೆಸ್ ಸ್ಯಾಡಿಸ್ಟ್ ಧಾಳಿ ನಡೆಸಿದೆ. ಅಂದಹಾಗೆ, ಕಮ್ಮುನಿಸ್ಟುಗಳು, ಕಾಂಗ್ರೆಸ್ಸಿಗರು ವೈಜಾನಿಕ ಮನೋಭಾವವುಳ್ಳವರು, ದೇವರ ಮೇಲೆ ನಂಬಿಕೆ ಇಲ್ಲದವರು ಅಂತ ಏನಿಲ್ಲ. ಅಧಿಕಾರ ಸಿಗಬೇಕಾದ್ರೆ ದೇವರೇಕೆ, ದೆವ್ವಕ್ಕೂ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸುತ್ತಾರೆ. ಇವರ experiment with truth ಏನಿದ್ದರೂ ಹಿಂದೂ ಎಂಬ ಗಿನಿ ಪಿಗ್ಗುಗಳ ಮೇಲೆ ನಡೆಯುವಂತದ್ದು. ಯಾವಾಗ್ಲೂ ಹಿಂದೂಗಳ ವಿಷಯದಲ್ಲೇ ಕಿರೀಕ್ ನಡೆಯೋದು. ಅನ್ಯಧರ್ಮೀಯರಿಗೆ ಸರ್ಕಾರದ ಅಭಯ‘ಹಸ್ತ’ ಯಾವಾಗ್ಲೂ ಇದೆ.
ದೇವರ ಮೇಲೆ ನಂಬಿಕೆ ಕಳಕೊಂಡವರ ಇನ್ನೊಂದು ಗುಂಪೂ ಇದೆ. ಬಾಲ ಕಳೆದುಕೊಂಡ ನರಿ ಇತರರಿಗೆ ಹಿತೋಪದೇಶ ಮಾಡಿದಂತೆ ಇತರರ ನಂಬಿಕೆಯನ್ನು ಕಳೆಯುವುದೇ ಅವರ ಉದ್ದೇಶ. ದೇವರನ್ನು ಏಕೆ ನಂಬಬೇಕು. ನಂಬಿದರೆ ಕೇಳಿದ್ದನ್ನು ಕೊಡುತ್ತಾನೋ ಅವನು? ನಾವು ಕೇಳುವ ಇಹಲೋಕದ ವಸ್ತು ಸುಖಗಳನ್ನು ದೇವರು ಕೊಡದಿರಬಹುದು. ಅಂಥಾ ಸುಖ ಸ್ವಲ್ಪ ಸಮಯದ ನಂತರ ಬೋರ್ ಹೊಡೆಸುತ್ತದೆ. ಶಾಶ್ವತವಾದ ಪಾರಮಾರ್ಥಿಕ ಸುಖದ ಅನುಭವ ಮಾಡಿಸುವ, ಅಂಥ ಸುಖವನ್ನು ಅನುಭವಿಸಲು ಬೇಕಾದ ಮನೋಭಾವವನ್ನು ಕೊಡೋದಕ್ಕೆ ಮಾತ್ರ ದೇವರಿಗೆ ಸಾಧ್ಯ ಮತ್ತು ದೇವರಿಗೆ ಮಾತ್ರ ಸಾಧ್ಯ. ರೈತರಿಗೆ ಸೌಲಭ್ಯ, ಗೃಹಸಾಲ ಯೋಜನೆ, ಗ್ರಾಮೀಣಯೋಜನೆ ಇತ್ಯಾದಿ ಇಹಜೀವನದ ಸುಖಗಳನ್ನು ನೀಡುವ (ನೀಡುವಂತೆ ತೋರಿಸಿಕೊಳ್ಳುವ ಭ್ರಷ್ಟಾಚಾರಿ ) ಸರ್ಕಾರ, ಹಿಂಬಾಗಿಲಿನಿಂದ ಪ್ರಜೆಗಳ ನಿಜವಾದ ಸುಖವನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿದೆ.
ಇನ್ನು ಕಾಂಗ್ರೆಸ್ ಎಂಬ ರಾಕ್ಷಸನಿಗೆ ಪಾಠ ಕಲಿಸಲು ಬಿಜೆಪಿ ಎನ್ನುವ ಕೊಳ್ಳಿದೆವ್ವದ ಸಹಾಯ ನಮಗೆ ಬೇಕಾಗಿರುವುದು ದೊಡ್ಡ ವಿಪರ್ಯಾಸ. ಒಳ್ಳೆಯದ್ದು ಬರುವ ತನಕ ಕಡಿಮೆ ಕೆಟ್ಟದ್ದನ್ನು ಆಯ್ದುಕೊಳ್ಳುವುದೇ ಹಿಂದೂಗಳಿಗೆ ಇರುವ ದಾರಿ.
ಹೌದು ಇಂತಹ ವಿಷಯದಲ್ಲಿ ಅನಂತ ಮೂರ್ತಿಯಾಗಲಿ, ಗಿರೀಶ್ ಕಾರ್ನಾಡಾಗಲಿ, ಏಕೆ ಬಾಯ್ಬಿಡಲ್ಲ ಅಂತ ಪ್ರಶ್ನೆ ಕೇಳಿ ಕೇಳಿ ಹಿಂದೂಗಳ ನಾಲಗೆ ನಾಕೌಟ್ ಆಗಿದೆ.
ಓದುಗರ ಅವಗಾಹನೆಗೆ ಒಂದಿಷ್ಟು ಸುದ್ದಿ ಇಲ್ಲಿದೆ.